Tuesday 21 July 2015

ಮುಚ್ಚಿದ ಕದದ ಹಿಂದೆ ನೀ ಕಣ್ಣಿರಾಗದಿರು ಸಾಕು..

ರಚ್ಚು,
ಇನ್ನೂ ಸಾವಿರ ಸಾವಿರ ಮಾತುಗಳು ಸಹ ನಿನ್ನನ್ನು ಮೊದಲಿನ ಶ್ರುತಿ ತುಂಬಿದ ಹಾಡಿಗೆ ವಾಪಸ್ಸು ತರೋಕೆ ಆಗಲ್ಲ ಅಂತ ಗೊತ್ತು.. ನೀ ಹಾಡಿದ್ದು ಭಾವವಿಲ್ಲದ ಭಾವ ಗೀತೆ.. ನಿನ್ನೆಲ್ಲಾ ಹಾಡಿಗೆ ನಾ ಕಟ್ಟಿಕೊಂಡ ಪುಟ್ಟ ಮನಸ್ಸಿನ, ದೊಡ್ಡ ಕನಸುಗಳು ಇನ್ನಿಲ್ಲದೆ ಕಾಡಿ., ಹನಿ ಹನಿಯಾಗಿ  ನನ್ನ ಕಣ್ಣ ತುಂಬಿಸಿವೆ..
ನಿನ್ನ ಹಾಡಿಗೆ ಮೈ ಮರೆತವ ನಾ..
ಒಂದೊಳ್ಳೆ ನೋಟಕ್ಕೆ ಕಾದ ಮುಠ್ಹಳ..
ಕಣ್ಮರೆಯಾದ ಅಪರಿಚಿತ ಅಂದು ನಿನಗೆ..

ನಿನ್ನ ಧ್ವನಿಯ ಆಲಿಸುವಾಸೆ.. ನಾ ಹುಡುಕಿದೆ ನಿನ್ನ ಕಂಠವ..
ಹಾಡು ಕೇಳಲು ಬಂದವ ಸೋತೆನಾ ನಿನ್ನ ಸ್ನೇಹಕೆ ?? ಪ್ರೀತಿಗೆ ??

ನಾ ಆಡಿದ ಮಾತು ತೊದಲು.. ಪೋಲಿ ಪದ ನನ್ನವು.. ತುಂಟ ನಗು ನಿನ್ನದು..
ಮುಟ್ಟಿತೆ ನನ್ನೀ ನೋವಿಲ್ಲದ ಮಾತು.. ?
ಕೊಟ್ಟೆಯ ನಿನ್ನ ನಗುವ., ನನ್ನ ಕಣ್ಣಂಚಿನ ಮಿಂಚಿಗೆ.. ?
ಕಳೆದವಾ ನಮ್ಮನು ನಾವು ದಿನಗಳ ನಡುವೆ..

ನಡು ಕೋಣೆಯ ಮೂಲೆಗೆ ಆನಿಸಿ ತುತ್ತಿಟ್ಟ ಅಮ್ಮ ನೀನು..
ಸಂದಿಯ ಬೆಳಕಿಗೆ ಮಿನುಗಿದ ನಿನ್ನ ತುಟಿಯ ಹೂ ಬಣ್ಣ..
ನಿನ್ನ ಕಾಲ ಕಿರುಬೆರಳನಿಡಿದು ಹಸಿಗಾಲ ದಿಟ್ಟಿಸಿದವ ನಾನು..
ಮಡಿಲಲ್ಲಿ ಮಲಗಿಸಿ ನನ್ನ ಕೂದಲ ಸ್ನೇಹಕೆ ಸೋತವ ನಿನ್ನ ಕೈ ಬೆರಳು.. ?
ಒಂದೊಳ್ಳೆ ಹಾಡಿನೊಂದಿಗೆ ಕಳೆದ ನಡುಬಿಸಿಲ ಕತ್ತಲು..
ಮಾತಿಲ್ಲದ ಇಳಿ ಸಂಜೆ.. ನಗು ತುಂಬಿದ ಬೆಳಕಿನ ರಾತ್ರಿ..

ಸುರಿವ ಮಳೆ ಸುಟ್ಟಂತೆ.. ತಂಗಾಳಿ ಉಸಿರು ಗಟ್ಟಿದಂತೆ..
ನಿನ್ನ ನಗುವಿಲ್ಲದ ಮುಂಜಾವು.. ನಿನ್ನ ಹಾಡಿಲ್ಲದ ಇರುಳು..
ಚಿಂತೆ ತಿಳಿಯದ ಮಗುವ ತೊರೆದ ತಾಯಿ ನೀನೀಗ..
ಮುದ್ದು ಮಾಡಲು ಬಾರದ ಪ್ರೇಮಿ ನಾನೀಗ..

ಅರಸಿ ಬಂದವ ನಾನು.. ನೀ ಕದ ಮುಚ್ಚಿದ್ದೇಕೆ.. ??
ನೋವು ತಿಳಿಯದವ ನಾ.. ಕಣ್ಣೀರು ಬರದೇಕೆ ??
ನೀ ದೊಡ್ಡವಳು.. ನಾ ಚಿಕ್ಕವ,, ನೀ ಸುರಿವ ಮುಗಿಲು.. ನಾ ತೆರೆದ ಭೂಮಿ..

ಎರಡು ತುತ್ತು.. ನಾಲ್ಕು ಮಾತು.. ಅದೇ ಹಾಡು.. ಉಸಿರೊಗುವ ಮುನ್ನ..
ಮುಚ್ಚಿದ ಕದದ ಹಿಂದೆ ನೀ ಕಣ್ಣಿರಾಗದಿರು ಸಾಕು..
ಹೊರಗೆ ಕಾದು ನಿಂತವ.. ನಾ ಎಂದಿಗೂ ನಿನ್ನವ..


                                                                                                          - ಓಂ..

No comments:

Post a Comment