Wednesday 13 August 2014

ಉಸಿರುಗಟ್ಟಿ ನೆಲಕ್ಕುರುಳುವ ಮುನ್ನ..

ಹಚ್ಚಿಕೊಳ್ಳೋದು ಹುಚ್ಚಿಡಿಸತ್ತದೆ. ಹುಚ್ಚು ಎದೆಯೊಡಲಲ್ಲಿ ಕಿಚ್ಚೆಬ್ಬಿಸಿ, ಕಾಡ್ಗಿಚ್ಚಾಗಿ ಹಬ್ಬಿ, ಸುಟ್ಟು ಕಪ್ಪು ಬೂದಿಯನ್ನಾಗಿ ಮಾಡಿದಾಗಲೆ ಗೊತ್ತಾಗೋದು, ಅದು ಹುಚ್ಚಾಟಕ್ಕೆ ಹಚ್ಚಿಸಿಕೊಂಡ ಪ್ರೀತಿ ಕಿಚ್ಚೆಂದು..
ಹಾಗೆ ಸುಮ್ಮನೆ ಬದುಕಿ ಬಿಡಬೇಕು, ಯಾರ ಕಣ್ಣ  ರೆಪ್ಪೆಯ ಅಂಚಿನ ಮಿಂಚಿಗಾಗಿ ಕಾಯದೆ. ಮಿಡಿತಗಳೆಲ್ಲ ಸುಳ್ಳಾಗಿ ಕಾಡಿ ಕೊಲ್ಲುವ ಮುನ್ನ., ಸುತ್ತ ಗಟ್ಟಿ ಕೋಟೆಯೊಂದನ್ನ ಕಟ್ಟುತ್ತಾ ಅದರಲ್ಲೇ ಮಣ್ಣಾಗಿ ಬಿಡಬೇಕು. ಮನದಾಸೆ ಆಸರೆಯ ಅರುಸುವ ಮುನ್ನ., ಪ್ರೀತಿಯ ಬೆನ್ನು ನೋಡುವ ಕ್ಷಣದ ಮುನ್ನ., ಉಸಿರುಗಟ್ಟಿ ನೆಲಕ್ಕುರುಳುವ ಮುನ್ನ., ದೂರ ಸಮುದ್ರದ ಮರಳ ತೀರದಲ್ಲಿ ಒಬ್ಬೊಂಟಿಯಾಗಿ ಸೂರ್ಯನನ್ನ ಮುಳುಗಿಸಬೇಕು.
ಯಾರದೊ ಮೇಲೆ ಕೋಪ., ಹಿಡಿತಕ್ಕೆ ಸಿಗದೆ ಜಾರಿ ಹೋಗುವ ಕಣ್ಣ ಹನಿಗಳು., ತಪ್ಪು ಸರಿ ಹುಡುಕಾಟಗಳು., ಗತಿಸದಕ್ಕೆ ನಿರಾಸೆಗಳು, ಕೈ ಜಾರಿದಕ್ಕೆ ಪಶ್ಚಾತಾಪ., ಕಳೆದುಕೊಳ್ಳುವ ಆತಂಕಗಳು., ಅರ್ಧ-ಅರ್ಧಕ್ಕೆ ಸೀಳಿ ಹಾಕುವ ಆಲೋಚನೆಗಳು., ಬೇಡ ! ಹಚ್ಚಿಕೊಳ್ಳೋದು ಬೇಡ., ಇದ್ದು ಬಿಡಬೇಕು ಕಡಲ ತೀರದ ಒಂಟಿ ಬಂಡೆಯಂತೆ..
ಮನದ ಗರ್ಭವ ಬಗೆದು., ಪ್ರೀತಿಯ ಬಿತ್ತಿ., ಸಂಬಂಧ ಸಿಟಿಲೊಡೆದು ನಗೆಯಾಗುವ ಮುನ್ನ., ಗರ್ಭಪಾತಕ್ಕೆ ಅಣಿಯಾಗುವ ಪಾಪದ ಬದಲಾಗಿ., ಮನವ ಬರುಡಾಗಿಸಿಕೊಳ್ಳಬೇಕು. ಜೀವಿಸಿ ಬಿಡಬೇಕು ನೋವ ಮರೆತ ಅನಾಥರಂತೆ..
ಬಯಸಿದ ಕೈ ಕಿರುಬೆರಳು., ಮತ್ಯಾರದೋ ಅಂಗಯ್ಯಲ್ಲಿ ನಲಿಯುವದ ನೋಡುವ ಮುನ್ನ, ಎದೆ ಬಾಗಿಲ ಮುಚ್ಚಿ ಕುರುಡಾಗಬೇಕು.. ಕೇಳಿ ಇಲ್ಲವೆನ್ನಿಸುಕೊಳ್ಳುವದಕ್ಕಿಂತ., ಕೇಳದೆ ಉಳಿದು ಬಿಡಬೇಕು.. ಬೇಡಿದ ವರ, ಭಿಕ್ಷೆ ಅನಿಸಿಕೊಳ್ಳದಂತೆ..
ಅದೇ ಹಾದಿ., ಸುಮ್ಮನೆ ಸಾಗಿ ಸವೆಸಿಬಿಡಬೇಕು., ಜೊತೆ ಸಿಕ್ಕ ನೆನಪುಗಳೆನೆಲ್ಲಾ ಒಂದೊಂದೇ ಪುಟ್ಟ ಪುಟ್ಟ ಪೆಟ್ಟಿಗೆಯೊಳಗೆ ಚಿಲಕವ ಹಾಕಿ ಅದೆಲ್ಲೊ ಮನದಾಳದಲ್ಲಿ ಮುಚ್ಚಿಟ್ಟು ಬಿಡಬೇಕು.. ಒಳಗಿನ ನೆನಪು ಬಿಕ್ಕಳಿಸಿದಾಗಲೆಲ್ಲ ನೀರುಣಿಸಿ ಹಾಗೆ ಕಣ್ಣು ಮಿಟುಕಿಸಿ ಮತ್ತೆ ಬಚ್ಚಿಡಬೇಕು.. ಉಸಿರಾಡಿಯು., ಜೀವಿಸದೆ., ಕಣ್ ಮುಚ್ಚಿಯೂ., ಮರೆಯದೆ., ಕೊನೆಗೆ ನಿನ್ನ ಪ್ರೀತಿಸಿಯು., ಪ್ರೀತಿಸದೆ ಹಾಗೆ ಸುಮ್ಮನೆ ಬದುಕಿ ಬಿಡಬೇಕು..