Monday 24 March 2014

ಇದೊಂದು ನನ್ನ ಪೋಲಿ ಕನಸು..

ಇದೊಂದು ನನ್ನ ಪೋಲಿ ಕನಸು.. ಇದು ನಿಜವಾಗುತ್ತೆ ಅನ್ನೋ ನಂಬಿಕೆ ಇಲ್ಲ., ಆದರೂ ಅದು ನನಗೆ ತುಂಬಾ ಇಷ್ಟವಾದ ಕನಸು.. ಮನ ಪುನಃ ಪುನಃ ಬಯಸೊ ಕನಸು.. ವಯಸ್ಸು ಯವ್ವನದ ಹೊಸ್ತಿಲಿಗೆ ಬಂದು ಕದ ತಟ್ಟಿ ನಿಲ್ಲುವ ವೇಳೆಗೆ ಮನಸ್ಸು ಕನಸ ಕಟ್ಟುವ ಕುಸುರಿ ಕಲೆಯನ್ನು ಕಲಿತಿತ್ತು., ಅದು ತನಗಿಷ್ಟವಾದ., ತನಗೆ ಖುಷಿ ಕೊಡುವ., ತಾನು ಬಯಸಿದ ಹಾಗೆ ಎಲ್ಲವೂ ನಡೆಯುವ ಜಗತ್ತು ಆ ಕನಸಿನ ಲೋಕ ! ಅದು ಹಾಗೆ ಮುಂದುವರೆದು., ಮನಸ್ಸು ವಯಸ್ಸಿನೊಂದಿಗೆ mature ಆಗುತ್ತಾ ಕಾಣುವ ಪ್ರತಿ ಕನಸು ನನಸಾಗಬೇಕೆಂಬ ಹಂಬಲ ಶುರುವಾಯ್ತು.. but ಒಂದು ಕನಸು ಮಾತ್ರ ಕೊಂಚ ಭಿನ್ನ ! ಅದು ಅವಳ ಕನಸು..
ಸಾಲು ಮರಗಳ ನಡುವಿನ ಖಾಲಿ ರಸ್ತೆಯ ಉದುರಿದ ಎಲೆಗಳ ಮೇಲೆ ಜೊತೆ ಜೊತೆ-ಜೊತೆಯಲಿ ಭುಜವ ತಾಕಿಸುತ್ತ ನನ್ನೊಡನೆ ನಡೆವವಳು.. ಯಾರವಳು ? ಎಲ್ಲಿಯವಳು ? ನಾ ಬಲ್ಲೆನೇ ? ಪರಿಚಯವಾ ? ನಿಜಕ್ಕೂ ಗೊತ್ತಿಲ್ಲ ! ಅವಳೊಂದು ಮುದ್ದಾದ ಕಲ್ಪನೆ.. ಹರೆಯದ ಕನಸು ಬಯಸತೊಡಗಿದೆ ನನ್ನೊಲವ ಹುಡುಗಿಯನ್ನ.. ಹೆಚ್ಚೆಚ್ಚು ಕಲಿತಂತೆ., ಬೆರೆತಂತೆ., ಬೆರೆಯುತ ಬೆಳೆದಂತೆ., ಆ ನನ್ನ ಕಲ್ಪನೆಯ ಹೆಣ್ಣಿನ ಬಗ್ಗೆ ನಿರೀಕ್ಷೆಗಳು ಮಾಗತೊಡಗಿವೆ.. ವರ್ಣಿಸಲು ಕೊಂಚ ಕಷ್ಟ., ಆದರೂ ಆ ನನ್ನ ಕಲ್ಪನೆಯ ಚಿತ್ರದ ಬಗ್ಗೆ ಹೇಳಲೆ ಬೇಕು..
ಅವಳ ಚೆಲುವು ಕಣ್ಣ ತುಂಬಿಸಿಬಿಡುವಂತದ್ದು., ಅವಳ ಸೌಂದರ್ಯ ದಟ್ಟ ಮಳೆ ಕಾಡಿನ ಹಾಗೆ ನಿರಂತರ.. ಸದಾ ಗಾಳಿಯೊಡನೆ ಸರಸವಾಡುವ ಮುಂಗುರುಳು., ತಾರೆಯಂತೆ ಹೊಳೆಯುವ ಶುಭ್ರ ಕಣ್ಣುಗಳು., ಮೃದು ಹಾಲ್ಗೆನ್ನೆ., ಮಳೆ ಹನಿಯೊಂದಿಗೆ ಬಾಗಿ ನಿಂತ ಚಿಗುರೆಲೆಯೆಂತಹ ಮೂಗು.. ಚೆಂದುಟಿಯ., ಚುಂಬಕ ಮುಗುಳ್ ನಗೆ.. ವೀಣೆ ಮಿಡಿದಂತೆ ಅವಳ ಧನಿ., ಎದೆಯ ಬಡಿತ ಹೆಚ್ಚಿಸುವ ಸ್ಪರ್ಶ., ಮಲೆನಾಡ ಭತ್ತದ ಗದ್ದೆಗೆ ಹೊಯ್ಯುವ ಮಳೆಯಂತಹ ಜೀವ ಉಳಿಸುವ ಅಪ್ಪುಗೆ ಅವಳದು.. ಸಮೃದ್ಧ ಭೂಮಿ ತಾಯಿಯಂತೆ ಶಾರೀರ.. ಬೆಂಕಿಯಷ್ಟು ಪರಿಶುದ್ದ ಅವಳು !
ಅವಳ ಆಂತರ್ಯಾ ಇನ್ನೂ ಚೆನ್ನವಿರಲೆಂಬ ಬಯಕೆ.. ನಿಷ್ಕಲ್ಮಶ ಮನಸ್ಸು., ಮುಗ್ದ ಮುನಿಸು.. ಸದಾ ನಗುವ ಅಂತರಾಳ.. ಹಿಂಸೆಯೇ ಅರಿಯದ ಹೃದಯ., ಕಣ್ಣಲ್ಲೇ ಮನದ ಮಾತನು ಅರಿತುಬಿಡುವ ಜಾಣೆ., ನನ್ನ ಜೀವನ ಲೆಕ್ಕಾಚಾರವ ಸರಿ ಪಡಿಸುವ ನಿಪುಣೆ.. ಸುಸಂಸ್ಕೃತ ಕುಟುಂಬದ ಕುಡಿ ಅವಳು., ಪ್ರತಿ ನಡೆ-ನುಡಿಯು ಭಾವಪೂರ್ಣ., ಪ್ರೀತಿ ಸಾಗರದ ಮುತ್ತು ಆ ಜೀವ..
ನನ್ನೆಲ್ಲಾ ತುಂಟಾಟಗಳ ಜೊತೆ ಬೆರುತು ಆಡುವ ಗೆಳತಿಯಾಗಿರಬೇಕು., ಈ ತಿಂಡಿ ಪೋತನ ಜೊತೆ ಹಂಚಿ ತಿಂದು ಸಂಭ್ರಮಿಸುವ ಸ್ನೇಹಿತಯಾಗಬೇಕು.. ನಾ ಕೊಳಕ., ನನ್ನ ಕಿವಿ ಹಿಂಡಿ, ಕೆಲಸವ ಹಂಚಿ ಮಾಡಿಸಬೇಕು.. ಒಲವ ಸುಧೆಯೊಡನೆ ನನ್ನ ಮೈ-ಮನದಲ್ಲಿ ಹರಿಯುತ ಸಮಯವ ಮರೆಸುವ ಸಂಗಾತಿಯಾಗಬೇಕು..

ಆಸೆಗಳು ನೂರಾರು., ಕನಸುಗಳು ಸಾವಿರಾರು., ಕೊನೆಯಿಲ್ಲದ ನೀರಿಕ್ಷೆಗಳು., ಹೀಗೆಲ್ಲಾ ಬಯಸೋದು ತಪ್ಪೋ-ಸರಿಯೋ ನಿಜಕ್ಕೂ ತಿಳಿಯದು., ಹುಚ್ಚು ಮನದ ತುಂಟಾಟಕ್ಕೆ ಬರೆದ ಚಿತ್ರ ಅವಳು., ಯಾವತ್ತಿಗಾದರೂ ಸಿಗುವಳೋ., ಸಿಗದೇ ಹೋಗುವಳೋ., ಸಿಕ್ಕು ಕೈ ಜಾರಿದರೆ ? ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ.. ಬದುಕಿನ ಚೈತನ್ಯವಾಗಿ ಉಳಿದು ಹೋಗಲಿ ಈ ಕನಸು..

Saturday 22 March 2014

ಎದೆಯ ಬಾಗಿಲು ಮುಚ್ಚಿ , ಎಲ್ಲ ನೆನಪುಗಳನ್ನು ಚಿಲಕ ಹಾಕಿ ಮುಚ್ಚಿಟ್ಟು, ಕೇಳಿಯೂ ಕೇಳದ ಹಾಗೆ, ಪ್ರೀತಿಸಿಯೂ ಇಲ್ಲದಹಾಗೆ, ಹಾಗೆ ಸುಮ್ಮನೆ ಬದುಕುವುದಾದರೂ ಏತಕ್ಕೆ?

ನೀ ಅಂದರೆ ನನಗಿಷ್ಟ., ಜೀವ ಸವೆದು ಹೋಗುವವರೆಗೂ ನಿನ್ನ ಜೊತೆ ಜೊತೆಗೆ ಹಾಗೆ ನಡೆದು ಬಿಡುವ ಬಯಕೆ., ಪ್ರತಿ ಕತ್ತಲ 
ರಾತ್ರಿಯೂ ನಿನ್ನ ಮಡಿಲಲ್ಲೆ ನಿದ್ದೆಗೆ ಜಾರುವ ಹಂಬಲ.., ಪ್ರತಿ ಮುಂಜಾವು ನಿನ್ನ ಕಣ್ಣ ನೋಡುತ್ತಲೇ ಆರಂಭಿಸುವ ಕೌತುಕ.. ಪ್ರತಿ ಮುಸ್ಸಂಜೆ ಕಡಲ ತೀರದ ಮರಳಲ್ಲಿ ನಿನ್ನ ಮೂಗಿಗೆ ಮೂಗು ತಾಕಿಸಿ ನಿನ್ನೆ ದಿಟ್ಟಿಸುತ್ತಾ ನಿಲ್ಲುವಾಸೆ.. ನನೆಲ್ಲಾ ಒಲವ ನಿನ್ನೆದೆಯ ಗುಬ್ಬಿ ಗೂಡಲ್ಲಿ ಕೂಡಿಡುವ ಬಯಕೆ.. ಹೇಗೆ ಹೇಳಲಿ ಇದನ್ನೆಲ್ಲಾ ನಿನ್ನೆದುರು., ನೀ ಕೂಡ ಹೀಗೆ ಅಪೇಕ್ಷಿಸುತ್ತಿರಬಹುದೆಂದು ಹೇಗೆ ತಾನೇ ಊಹಿಸಲಿ ?? ಹೇಳುವುದಕ್ಕೆ ಭಯವಲ್ಲ., ಇದಕ್ಕೆ ಬರುವ ಪ್ರತ್ಯುತ್ತರದ ಭಯ ನನ್ನ ಮನಸಿಗೆ.. ನಿನ್ನೀ ಒಡನಾಟದ ಖುಷಿ ಸಾಕು ಇಂದು ನನ್ನ ಉಸಿರಾಟಕ್ಕೆ., ಇದಕ್ಕಿಂತ ಹೆಚ್ಚೆನು ಬಯಸಲಾರೆ., ಹೇಳಲಾರೆ ಏನನ್ನು., ನಿನ್ನೆಡಿಗಿನ ನನ್ನೊಲವ ಮಿಡಿತವ ಹೊರ ಎಳೆದು ತೋರಲಾರೆ.. ಮನದ ಭಾವನೆಗಳ ಸಂತೆಯಲಿ., ನಿನ್ನ ಪುಟ್ಟು ಕೈಗಳ ಸಾಂಗತ್ಯವ ನಾ ಕಳೆದುಕೊಳ್ಳಲಾರೆ..

Thursday 6 March 2014

ಹಾಗೆ ಸುಮ್ಮನೆ ಬದುಕಿ ಬಿಡಬೇಕು..

ಹಚ್ಚಿಕೊಳ್ಳೋದು ಹುಚ್ಚಿಡಿಸತ್ತದೆ. ಹುಚ್ಚು ಎದೆಯೊಡಲಲ್ಲಿ ಕಿಚ್ಚೆಬ್ಬಿಸಿ, ಕಾಡ್ಗಿಚ್ಚಾಗಿ ಹಬ್ಬಿ, ಸುಟ್ಟು ಕಪ್ಪು ಬೂದಿಯನ್ನಾಗಿ ಮಾಡಿದಾಗಲೆ ಗೊತ್ತಾಗೋದು, ಅದು ಹುಚ್ಚಾಟಕ್ಕೆ ಹಚ್ಚಿಸಿಕೊಂಡ ಪ್ರೀತಿ ಕಿಚ್ಚೆಂದು..
ಹಾಗೆ ಸುಮ್ಮನೆ ಬದುಕಿ ಬಿಡಬೇಕು, ಯಾರ ಕಣ್ಣ  ರೆಪ್ಪೆಯ ಅಂಚಿನ ಮಿಂಚಿಗಾಗಿ ಕಾಯದೆ. ಮಿಡಿತಗಳೆಲ್ಲ ಸುಳ್ಳಾಗಿ ಕಾಡಿ ಕೊಲ್ಲುವ ಮುನ್ನ., ಸುತ್ತ ಗಟ್ಟಿ ಕೋಟೆಯೊಂದನ್ನ ಕಟ್ಟುತ್ತಾ ಅದರಲ್ಲೇ ಮಣ್ಣಾಗಿ ಬಿಡಬೇಕು. ಮನದಾಸೆ ಆಸರೆಯ ಅರುಸುವ ಮುನ್ನ., ಪ್ರೀತಿಯ ಬೆನ್ನು ನೋಡುವ ಕ್ಷಣದ ಮುನ್ನ., ಉಸಿರುಗಟ್ಟಿ ನೆಲಕ್ಕುರುಳುವ ಮುನ್ನ., ದೂರ ಸಮುದ್ರದ ಮರಳ ತೀರದಲ್ಲಿ ಒಬ್ಬೊಂಟಿಯಾಗಿ ಸೂರ್ಯನನ್ನ ಮುಳುಗಿಸಬೇಕು.
ಯಾರದೊ ಮೇಲೆ ಕೋಪ., ಹಿಡಿತಕ್ಕೆ ಸಿಗದೆ ಜಾರಿ ಹೋಗುವ ಕಣ್ಣ ಹನಿಗಳು., ತಪ್ಪು ಸರಿ ಹುಡುಕಾಟಗಳು., ಗತಿಸದಕ್ಕೆ ನಿರಾಸೆಗಳು, ಕೈ ಜಾರಿದಕ್ಕೆ ಪಶ್ಚಾತಾಪ., ಕಳೆದುಕೊಳ್ಳುವ ಆತಂಕಗಳು., ಅರ್ಧ-ಅರ್ಧಕ್ಕೆ ಸೀಳಿ ಹಾಕುವ ಆಲೋಚನೆಗಳು., ಬೇಡ ! ಹಚ್ಚಿಕೊಳ್ಳೋದು ಬೇಡ., ಇದ್ದು ಬಿಡಬೇಕು ಕಡಲ ತೀರದ ಒಂಟಿ ಬಂಡೆಯಂತೆ..
ಮನದ ಗರ್ಭವ ಬಗೆದು., ಪ್ರೀತಿಯ ಬಿತ್ತಿ., ಸಂಬಂಧ ಸಿಟಿಲೊಡೆದು ನಗೆಯಾಗುವ ಮುನ್ನ., ಗರ್ಭಪಾತಕ್ಕೆ ಅಣಿಯಾಗುವ ಪಾಪದ ಬದಲಾಗಿ., ಮನವ ಬರುಡಾಗಿಸಿಕೊಳ್ಳಬೇಕು. ಜೀವಿಸಿ ಬಿಡಬೇಕು ನೋವ ಮರೆತ ಅನಾಥರಂತೆ..
ಬಯಸಿದ ಕೈ ಕಿರುಬೆರಳು., ಮತ್ಯಾರದೋ ಅಂಗಯ್ಯಲ್ಲಿ ನಲಿಯುವದ ನೋಡುವ ಮುನ್ನ, ಎದೆ ಬಾಗಿಲ ಮುಚ್ಚಿ ಕುರುಡಾಗಬೇಕು.. ಕೇಳಿ ಇಲ್ಲವೆನ್ನಿಸುಕೊಳ್ಳುವದಕ್ಕಿಂತ., ಕೇಳದೆ ಉಳಿದು ಬಿಡಬೇಕು.. ಬೇಡಿದ ವರ, ಭಿಕ್ಷೆ ಅನಿಸಿಕೊಳ್ಳದಂತೆ..
ಅದೇ ಹಾದಿ., ಸುಮ್ಮನೆ ಸಾಗಿ ಸವೆಸಿಬಿಡಬೇಕು., ಜೊತೆ ಸಿಕ್ಕ ನೆನಪುಗಳೆನೆಲ್ಲಾ ಒಂದೊಂದೇ ಪುಟ್ಟ ಪುಟ್ಟ ಪೆಟ್ಟಿಗೆಯೊಳಗೆ ಚಿಲಕವ ಹಾಕಿ ಅದೆಲ್ಲೊ ಮನದಾಳದಲ್ಲಿ ಮುಚ್ಚಿಟ್ಟು ಬಿಡಬೇಕು.. ಒಳಗಿನ ನೆನಪು ಬಿಕ್ಕಳಿಸಿದಾಗಲೆಲ್ಲ ನೀರುಣಿಸಿ ಹಾಗೆ ಕಣ್ಣು ಮಿಟುಕಿಸಿ ಮತ್ತೆ ಬಚ್ಚಿಡಬೇಕು.. ಉಸಿರಾಡಿಯು., ಜೀವಿಸದೆ., ಕಣ್ ಮುಚ್ಚಿಯೂ., ಮರೆಯದೆ., ಕೊನೆಗೆ ನಿನ್ನ ಪ್ರೀತಿಸಿಯು., ಪ್ರೀತಿಸದೆ ಹಾಗೆ ಸುಮ್ಮನೆ ಬದುಕಿ ಬಿಡಬೇಕು.. 

Tuesday 4 March 2014

ಯಾವತ್ತಿಗೂ ನನ್ನಲ್ಲೇ ಉಳಿದು ಹೋಗಲಿರುವ..

ಯಾವತ್ತಿಗೂ ನನ್ನಲ್ಲೇ ಉಳಿದು ಹೋಗಲಿರುವ., ಯಾರಿಗೂ ನೀಡಲು ಆಗದ ಹೀಗೊಂದು ಆತ್ಮೀಯ ಪತ್ರವೊಂದನು ನನಗೆ ನಾನೇ ಬರೆಯುತ್ತಾ ಕೂತಿರುವೆ.. ಇದು ನನ್ನ ನಂಬಿಕೆ., ಪ್ರತಿಯೊಬ್ಬರಿಗೂ ಒಳ ಮನಸ್ಸೆಂಬುದು ಇರಬೇಕು., ಜೀವನದ ಕೆಲವು ಗುಟ್ಟುಗಳನು ಅದರಲ್ಲಿ ಬಚ್ಚಿಟ್ಟಿರಬೇಕು.. One should have some secrets ! ಕೆಲವು ತುಂಬಾ ಮುದ ನೀಡುವಂತವು., ಹಿತವಾದ ಗುಟ್ಟುಗಳಾಗಿರಬಹುದು ಮತ್ತೆ ಕೆಲವು ವಿಷದಷ್ಟೂ ಕಹಿ ! ಆದರೂ ನಮ್ಮದೇ ಮನದ ಆಸ್ತಿಯ ಹಾಗೆ..
ದಟ್ಟ ಕಾನನದ ನಡುವೆ ಸುರಿವ ಸೋನೆ ಮಳೆಯ ಪ್ರೀತಿಸುವ ನದಿಯ ಹಾಗೆ ಸದ್ದಿಲ್ಲದೆ ನೆನಪಿನ ಪ್ರತಿ ಹನಿಯ ಕೂಡಿಡುತ್ತಾ ಸಾಗಿ ಬಿಡಬೇಕು.. ಅದು ಒಂಥರಾ ಸಂತೋಷ., ಬರೀ ನನಗಷ್ಟೇ ಗೊತ್ತಿರುವ ಸತ್ಯ., ನನ್ನೆದೆಯೊಳಗೆ ಉಳಿದು ಹೋಗಲಿರುವ ಮಧುರಾತಿ ಮಧುರ ನೆನಪುಗಳು., ಕೇವಲ ನಾನಾಷ್ಟೆ ಮೀಯಬಲ್ಲ ಒಲವ ನೋವಿನ ತೀರ..
ಇನ್ನ್ಯಾರಿಗೂ ಅರ್ಥವಾಗದ ಭಾಷೆಯದು., ಯಾರು ಅರಿಯದ ಆಳವದು., ನನ್ನತರಂಗದ ಗಂಗೆಯದು.. ಜೀವದ ಮಿಡಿತಕ್ಕೆ ಉಸಿರಾಗಿ ನಿಂತ ಹಸಿರದು.. ಭಾವದ ಬೆಂಬಲಕ್ಕೆ ನಿಲ್ಲಬೇಕು., ಅಂತರಾಳದ ಭಾವನೆಗೆ ಬೆನ್ನೆಲುಬಾಗಬೇಕು.. we should secure our self respect.,

ನನಗೆ ನಾನು ಮಾತ್ರ ಅನುಭವಿಸಬೇಕಾದ ಜೀವನದ ಭಾಗ ಆ ಗುಟ್ಟು.. ಆದ್ಯರದೋ ಪ್ರೀತಿ., ಬಯಸದೆ ಬಂದ ಒಲವಿನ ಅಲೆ., ಎದೆ ತುಂಬಿ ಬಂದ ದುಃಖ., ತುಟಿಯಂಚಿಂದ ಜಾರಿದ ಮುತ್ತು., ಕಣ್ಣಂಚಿನ್ನಲ್ಲೇ ಉಳಿದ ಹನಿ., ಮೊದಲ ಅಪ್ಪುಗೆ., ಅದು ಎಂತಹದ್ದೋ ಕೆಟ್ಟ ಕೋಪ., ಉಸಿರು ನಿಲ್ಲಿಸಿದ ಕುಡಿ ನೋಟ.. ನೆಲಕ್ಕೆ ಬೀಳುವಂತೆ ಅಪ್ಪಳಿಸಿದ ಅವಮಾನ., ಅಂಗಾಲಚಿ ಪಡೆದ ಪ್ರೀತಿ ಭಿಕ್ಷೆ., ಮನದಾಳದಿಂದ ಬಂದ ಕರುಣೆ., ಹಂಚಿ ತಿಂದ ತುತ್ತು.. ಇನ್ಯಾರಿಗೂ ಹಂಚದೆ ಉಳಿಸಿಕೊಂಡು ಬಿಡಬೇಕು.. ಹಾಗೆ ಅನುಭವಿಸುತ್ತಾ ಬದುಕಿ ಬಿಡಬೇಕು.. ಯಾರಿಗೂ ಹೇಳದೆ., ನನ್ನಲ್ಲಿ ನಾನಾಗಿ., ನನ್ನೊಡನೆ ನಾನೇ ಮಾತಾಗಿ., ಮಾತಿಗೆ ಊಗುಟ್ಟಿ ಮಲಗಿದ ಮಗುವಿನ ಹಾಗೆ..

Saturday 1 March 2014

ಮೊದಲ ಮಳೆಯಲಿ ಮೀಯಲು ಕಾದು ಕುಳಿತು....

ಇನ್ನೆಷ್ಟು ದಿನ., ಆದಿನ್ನೆಷ್ಟು ವರುಷಗಳು.. ಒಲವ ಬೇಗೆಯ ತೀರಿಸಿ., ಸುಡುತಿರುವ ಒಡಲಿಗೆ ತಂಪೇರೆದು., ಹೊಸ ಚಿಗುರಿಗೆ ಜೀವವಿತ್ತಿ., ಹಚ್ಚ ಹಸಿರಾಗಿ ಅರಳಿ ನಿಂತು ಮಂದಹಾಸ ಬೀರಲು..? ಕಾದ ಭುವಿಯ ಹಾಗಾಗಿದೆ ಮನ., ಅದೆಷ್ಟು ದಿನಗಳಾದವು ಚುಮು ಚುಮು ಮಳೆಗೆ ಮೈಒಡ್ಡಿ., ಹೇಳದೇ ಉಳಿದು ಹೋದದ್ದನ್ನೆಲ್ಲಾ ಮಳೆ ಹನಿಗಳ ಚಿಟ ಪಟ ಸದ್ದಿನ ನಡುವೆಯೇ ಉಸುರಿ ಬಿಡಬೇಕೆನಿಸಿದೆ.. ತುಂತುರು ಮಳೆಗಾಗಿ ಹಂಬಲಿಸಿದೆ ಮನ..
ಇದು ತೀರದ ನೋವ ಅಳಿಸಿ ಹಾಕುವ ಪ್ರಯತ್ನವಲ್ಲ., ನೋವಿನ ಬಾಯಾರಿಕೆಯ ತಣಿಸಿ ಅದರೊಂದಿಗೆ ರಾಜಿಯಾಗುವ ಸಂಧಾನದ ಹಾಗೆ.. ಪ್ರೀತಿಯೆಡೆಗೆ ಅಂತಹದ್ದೊಂದು ಅಭಿಮಾನವಿರಬೇಕು., ಬಯಸಿದ್ದು ತಪ್ಪಲ್ಲ., ಪ್ರೀತಿಸಿದ್ದು ತಪ್ಪಲ್ಲ., ಕಳೆದ ಪ್ರತಿ ಘಳಿಗೆ., ಆಡಿದ ಪ್ರತಿ ಮಾತು., ನೂರಾರು ಅವಮಾನ., ಕೂಡಿಟ್ಟ ಪ್ರತಿ ಕನಸು., ಸಾವಿರ ಜಗಳ., ಕಣ್ಣಂಚಿನ ಕಣ್ಣೀರು.. ಪ್ರತಿ ಹೂ ಮುತ್ತು ಎಲ್ಲವೂ ಅಂದು ಬಯಸಿದ್ದು., ಬಯಸಿ ಪಡೆದದ್ದು.. ಅಂದು ಅದು ಖುಷಿ ಕೊಡುತ್ತದೆ ಅಂತಲೇ ಮಾಡಿರುತ್ತೇವೆ.. So today we should not regret about it !
ಯಾವುದು ತಪ್ಪಲ್ಲ., ಯಾವುದು ಸರಿಯಲ್ಲ., ಈ ಕ್ಷಣ ಯಾವುದು ಖುಷಿ ಕೊಡುವುದೋ ಹಾಗೆ ಬದುಕಿ ಬಿಡಬೇಕು.. ಕೆಳೆದ ಪ್ರತಿ ಕ್ಷಣವನು ನೆನಪಿಂಗಳದಲಿ ಆಡಲು ಬಿಟ್ಟು., ಮಧುರ ವಿದಾಯವ ಹೇಳಿ ಹೊರಟು ಬಿಡಬೇಕು.. ನೋವಿನ ಮಡಿಲಿಗೆ ಮಗುವಾಗದೆ., ಕಳೆದ ಮಗುವಿನ ತಾಯಗದೆ., ತೊರೆದ ಪ್ರೀತಿಯ ಹೃದಯಕ್ಕೆ ಭಾರವಾಗದೆ., ಸಣ್ಣದೊಂದು ನಗೆ ಬೀರಿ ಕಣ್ಮರೆಯಾಗಿ ಬಿಡಬೇಕು..
ಮೌನ ಹನಿ ಗೂಡಿ ಹೆಪ್ಪಗಿದೆ.. ನೆನಪುಗಳನೆಲ್ಲ ತೋಯಿಸಿ ತಣ್ಣಗಿಡಲು., ಮೋಡವನೆ ದಿಡ್ಡಿಸುತ್ತಿರುವೆ ಮೊದಲ ಮಳೆಯಲಿ ಮೀಯಲು ಕಾದು ಕುಳಿತು..